ನೂಡಿಬ್ರ್ಯಾಂಕಿಯ
ಮೃದ್ವಂಗಿ ವಂಶದ, ಗ್ಯಾಸ್ಟ್ರಾಪೊಡ (ಉದರಪಾದಿ) ವರ್ಗದ, ಓಪಿಸ್ತೋಬ್ರ್ಯಾಂಕಿಯ ಗಣಕ್ಕೆ ಸೇರಿದ ಉಪವರ್ಗ. ಇದಕ್ಕೆ ಸೇರಿದ ಮೃದ್ವಂಗಿಗಳನ್ನು ಸಮುದ್ರದ ಗೊಂಡೆಹುಳುಗಳು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇವಕ್ಕೆ ಚಿಪ್ಪಾಗಲೀ ಮ್ಯಾಂಟಲ್ ಕುಹರವಾಗಲೀ ಟೆನಿಡಿಯಮ್ ಆಗಲೀ ಇಲ್ಲ. ಕಿವಿರುಗಳು ಇರಬಹುದು.

	ಈ ಪ್ರಾಣಿಗಳು ವಿವಿಧ ವರ್ಣಗಳಿಂದ ಕೂಡಿದ್ದು ಸಮುದ್ರದ ಅತ್ಯಂತ ಸುಂದರವಾದ ಪ್ರಾಣಿಗಳಲ್ಲಿ ಕೆಲವು ಎನಿಸಿವೆ. ಇವು ಇತರ ಪ್ರಾಣಿಗಳನ್ನು ಕೊಂದು ತಿನ್ನುವ ಸ್ವಭಾವದವುಗಳು; ಪ್ರಮುಖವಾಗಿ ಕುಟುಕು ಕಣಜೀವಿಗಳನ್ನು ತಿಂದು ಜೀವಿಸುತ್ತವೆ. ಇವು ಎಲ್ಲ ಸಮುದ್ರಗಳಲ್ಲೂ ಇದ್ದು ಮೊಣಕಾಲುದ್ದ ನೀರಿಂದ ಹಿಡಿದು ಸಾಧಾರಣ ಅಳವಿರುವೆಡೆಗಳಲ್ಲೂ ಕಂಡುಬರುತ್ತವೆ. ಆದರೆ ಇವುಗಳ ಅತಿ ಹೆಚ್ಚಿನ ವೈವಿಧ್ಯ ಕಾಣುವುದು ಉಷ್ಣವಲಯದ ಸಾಗರಗಳಲ್ಲಿ, ನ್ಯೂಡಿಬ್ರ್ಯಾಂಕಿಯದಲ್ಲಿ ಡೆಂಡ್ರೊನೋಟಿಡೀ (ಉದಾ: ಡೆಂಡ್ರೊನೋಟಸ್), ಡೋರಿಡಿಡೀ (ಉದಾ: ಡೋರಿಸ್), ಇಯೋಲಿಡಿಡೀ (ಉದಾ: ಇಯೋಲಿಸ್) ಮತ್ತು ಎಲಿಸೈಯಿಡೀ (ಉದಾ: ಎಲಿಸಿಯ) ಎಂಬ ನಾಲ್ಕು ಕುಟುಂಬಗಳಿವೆ.
(ಕೆ.ಎಂ.ವಿ.)